ಸಿಎಂ ಸಿದ್ದು ಕನಸಿನ ಇಂದಿರಾ ಕ್ಯಾಂಟೀನ್ ಗಳಿಗೆ ಇಂದು ವಿದ್ಯುಕ್ತ ಚಾಲನೆ

ಬೆಂಗಳೂರು: ಸಿಎಂ ಸಿದ್ದ ರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಇಂದಿರಾ ಕ್ಯಾಂಟೀನ್‌ಗಳಿಗೆ ಬುಧವಾರ ವಿದ್ಯುಕ್ತ ಚಾಲನೆ ನೀಡಲಾಗುತ್ತಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು  ಬೆಂಗಳೂರಿನಲ್ಲಿ ಇಂದಿರಾ ಕ್ಯಾಟೀನ್ ಗಳಿಗೆ ಚಾಲನೆ ನೀಡಲಿದ್ದಾರೆ.

 

 

ಬೆಂಗಳೂರಿನ ಎಲ್ಲ ಒಟ್ಟು 198 ವಾರ್ಡ್ ಗಳಲ್ಲಿ ವಾರ್ಡ್ ಗೆ ಒಂದರಂತೆ ಒದೊಂದು ಇಂದಿರಾ ಕ್ಯಾಂಟೀನ್ ಆರಂಭಿಸಲು ಯೋಜನೆ ರೂಪಿಸಲಾಗಿದ್ದು, ಇದರ ಮೊದಲ ಭಾಗವಾಗಿ ಇಂದು 101 ಕ್ಯಾಂಟೀನ್ ಗಳಿಗೆ ಚಾಲನೆ  ನೀಡಲಾಗುತ್ತಿದೆ. ಉದ್ಘಾಟನಾ ದಿನವಾದ ಎಂದು ಗ್ರಾಹಕರಿಗೆ ಊಟವನ್ನು ಉಚಿತವಾಗಿ ನೀಡಲು ಯೋಜಿಸಲಾಗಿದ್ದು, ಅದರಂತೆ ಮೊದಲ ದಿನ ಎಲ್ಲ ಕ್ಯಾಂಟೀನ್‌ಗಳಲ್ಲೂ ಜನರಿಗೆ ರಾತ್ರಿ ಊಟ ಉಚಿತವಾಗಿ ನೀಡಲಾಗುತ್ತಿದೆ.

 

 

ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು, "ಜಯನಗರದ ಕನಕನಪಾಳ್ಯದ ಇಂದಿರಾ ಕ್ಯಾಂಟೀನ್‌ ಅನ್ನು ರಾಹುಲ್‌ ಗಾಂಧಿ ಬೆಳಿಗ್ಗೆ 11.30ಕ್ಕೆ  ಉದ್ಘಾಟಿಸಲಿದ್ದಾರೆ. ಆ ಮೂಲಕ ಜನಸಾಮಾನ್ಯರ ಹಸಿವು ನೀಗಿಸಲು ಮೊದಲ ಹಂತದಲ್ಲಿ ಸಜ್ಜುಗೊಳಿಸಿರುವ 101 ಕ್ಯಾಂಟೀನ್‌ಗಳು ಮತ್ತು 6 ಅಡುಗೆ ಮನೆಗಳಿಗೆ ಏಕಕಾಲದಲ್ಲಿ ಚಾಲನೆ ಸಿಗಲಿದೆ. ಕನಕನಪಾಳ್ಯದ ಇಂದಿರಾ  ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ  5,000ದಿಂದ 6,000 ಜನರಿಗ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಗುರುವಾರದಿಂದ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ದೊರೆಯಲಿದೆ ಎಂದು ಹೇಳಿದರು.

 

 

ಇದೇ ವೇಳೆ "ಬಜೆಟ್‌ನಲ್ಲಿ ಘೋಷಿಸಿದ ಯೋಜನೆ ಕೇವಲ 63 ದಿನಗಳಲ್ಲಿ ಅನುಷ್ಠಾನಗೊಂಡಿದೆ. ಇದು ಬಿಬಿಎಂಪಿ ಚರಿತ್ರೆಯಲ್ಲೂ ದಾಖಲಾಗಲಿದೆ. ಕೆಲವು ಕಡೆ ವಿರೋಧ ವ್ಯಕ್ತವಾಗದಿದ್ದರೆ ಮತ್ತು ಸೂಕ್ತ ಜಾಗ ಸಿಕ್ಕಿದ್ದರೆ ಎಲ್ಲ 198  ವಾರ್ಡ್‌ ಗಳಲ್ಲೂ ಕ್ಯಾಂಟೀನ್‌ಗಳು ಆರಂಭವಾಗುತ್ತಿದ್ದವು. ಉಳಿದ ಕ್ಯಾಂಟೀನ್‌ ಗಳು ಹಂತಹಂತವಾಗಿ ಪೂರ್ಣವಾಗಲಿದ್ದು, ಅಕ್ಟೋಬರ್‌ ಒಳಗೆ ಎಲ್ಲ ವಾರ್ಡ್ ಗಳಲ್ಲೂ ಕ್ಯಾಂಟೀನ್ ಗಳು ಆರಂಭವಾಗಲಿವೆ.  ಕ್ಯಾಂಟೀನ್‌ಗಳಲ್ಲಿ  ನೀಡುವ ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿಮಾಡಿಕೊಳ್ಳುವುದಿಲ್ಲ. ಪಂಚತಾರಾ ಹೋಟೆಲ್‌ಗಳಲ್ಲಿರುವಂತೆ ಗುಣಮಟ್ಟದ ಅಡುಗೆ ಮನೆಗಳನ್ನು ನಿರ್ಮಿಸಲಾಗಿದೆ. ಗುಣಮಟ್ಟದ ಕಾರ್ಯವಿಧಾನ ಅನುಸರಿಸಲು ಕೈಪಿಡಿ  ಸಿದ್ಧಪಡಿಸಲಾಗಿದ್ದು, ಶುಚಿ, ರುಚಿ, ಗುಣಮಟ್ಟ ಕಾಯ್ದುಕೊಳ್ಳುವಂತಹ ಸಂಸ್ಥೆಗಳನ್ನೇ ಹುಡುಕಿ, ಗುತ್ತಿಗೆ ನೀಡಲಾಗಿದೆ’ ಎಂದು ಸಚಿವ ಜಾರ್ಜ್ ತಿಳಿಸಿದರು.

 

 

ಸಚಿವರು ಇದೇ ವೇಳೆ ಇಂದಿರಾ ಕ್ಯಾಂಟೀನ್‌ ಆ್ಯಪ್‌ ಮತ್ತು ಗುಣಮಟ್ಟ ಕಾರ್ಯವಿಧಾನದ ಕೈಪಿಡಿ ಬಿಡುಗಡೆ ಮಾಡಿದ ಸಚಿವರು, "ಮುಂದೆಯೂ ನಮ್ಮದೇ ಪಕ್ಷ ಅಧಿಕಾರಕ್ಕೆ ಬರಲಿದೆ. ಇಂದಿರಾ ಕ್ಯಾಂಟೀನ್‌ಗಳನ್ನು ನಮ್ಮ  ಸರ್ಕಾರವೇ ಮುನ್ನಡೆಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಹಸಿವು ಮುಕ್ತ ರಾಜ್ಯಕ್ಕಾಗಿ ಅನ್ನಭಾಗ್ಯ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ ಅವರು, ಹಸಿವು ಮುಕ್ತ ಬೆಂಗಳೂರಿಗಾಗಿ ಇಂದಿರಾ ಕ್ಯಾಂಟೀನ್‌ ಘೋಷಿಸಿದರು.  ಈ ಯೋಜನೆಗೆ ಅವರು ವೈಯಕ್ತಿಕ ಆಸಕ್ತಿ ವಹಿಸಿದ್ದಾರೆ. ಹಣದ ಕೊರತೆ ಇಲ್ಲ. ಒಳ್ಳೆಯ ಆಹಾರ ಒದಗಿಸಿ ಎನ್ನುವ ಸೂಚನೆ ಕೂಡ ಕೊಟ್ಟಿದ್ದಾರೆ"  ಎಂದು ಹೇಳಿದರು.

Category: